2 Mar 2015

Ramalinga Kamanna Navalgund (ನವಲಗುಂದ ರಾಮಲಿಂಗ ಕಾಮಣ್ಣ)

ರಾಮಲಿಂಗ ಕಾಮಣ್ಣ ನವಲಗುಂದ 


     ಕಾಮನೆಗಳನ್ನು ಈಡೇರಿಸುವ ರಾಮಲಿಂಗ ಕಾಮಣ್ಣಹೋಳಿ ಹುಣ್ಣಿಮೆ ಬಂದರೆ ಸಾಕು ಯುವ ಸಮುದಾಯ ಕುಣಿದು ಕುಪ್ಪಳಿಸುತ್ತದೆ. ರಂಗು ರಂಗಿನ ಬಣ್ಣಗಳನ್ನು ಒಬ್ಬರಿಗೊಬ್ಬರು ಎರಚಿ ಸಂತಸ ಪಡುವ ದಿನ.

  ದಿನದ ಧಾರ್ಮಿಕ ವಿದಿ ವಿಧಾನಗಳನ್ನು ಆಚರಣೆಯ ಉದ್ಧೇಶಗಳನ್ನು ಒಂದಿಷ್ಟು ಅವಲೋಕಿಸೋಣ

                ಶಿವ ಪಾರ್ವತಿಯರಿಂದ ಹುಟ್ಟಿವ ಷಣ್ಕುಖನಿಂದ ಮೂರುಲೋಕ ಕಂಠಕ ತಾರಕಾಸುರ ರಾಕ್ಷಸನ ಸಂಹಾರ ಮಾಡಬೇಕಾದುದರಿಂದ ಶಿವ ಪಾರ್ವತಿಯ ಮದುವೆ ಮಾಡಬೇಕು. ಕಾರಣ ಶಿವನ ತಪಸ್ಸನ್ನು ಭಂಗ ಮಾಡಲು ವಿಷ್ಣು ವಿನ ಮಗ ಮನ್ಮಥನಿಗೆ ಎಲ್ಲ ದೇವತೆಗಳು ಹೇಳುತ್ತಾರೆ. ಆಗ ಮನ್ಮಥನು ಪುಷ್ಪ ಬಾಣ  ಬಿಟ್ಟು ಶಿವನ ತಪಸ್ಸನ್ನು ಭಂಗ ಮಾಡುತ್ತಾನೆ. ಶಿವ ಸಿಟ್ಟಿಗೆದ್ದು ತನ್ನ ಮೂರನೇ ಕಣ್ಣಿನಿಂದ ಸುಡುತ್ತಾನೆ. ಇದರ ದ್ಯೋತಕವಾಗಿ ಕಾಮ ದಹನವನ್ನು ಹೋಳಿ ಹಬ್ಬವನ್ನಾಗಿ ಆಚರಿಸುವ ಪರಂಪರೆ ಬೆಳೆದು ಬಂದಿದೆ. ಈಕಾಮದಹನ ಪ್ರಸಂಗವು ಮಹಾಕವಿ ಕಾಳಿದಾಸಕುಮಾರ ಸಂಭವಹಾಗೂ ಹರಿಹರನಗಿರಿಜಾ ಕಲ್ಯಾಣದಲ್ಲಿ ಉಲ್ಲೇಖಿಸಲಾಗಿದೆ.

ನವಲಗುಂದದಲ್ಲಿಯ ವಿಶೇಷ :

          ನವಲಗುಂದದಲ್ಲಿಯ ಆಚರಣೆ ರಾಜ್ಯದಲ್ಲಿಯೇ ವಿಶಿಷ್ಟ ರೀತಿಯದು. ಜನರು ಶಿವ ಪಾರ್ವತಿಯನ್ನು ಪೂಜಿಸುವುದು ಸಾಮಾನ್ಯ ಆದರೆ ಇಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಕಾಮನ ಉಪಾಸನೆಯನ್ನು ಮಾಡುವುದು ವಿಶಿಷ್ಟ. ಚಾವಡಿ,ಸಿದ್ಧಾಪೂರ ಒಣಿ, ಮಾದರ ಓಣಿ, ತೆಗ್ಗಿನಕೇರಿ, ಹಳ್ಳದ ಒಣಿ, ಗೌಡರ ಓಣಿ,ಮಚ್ಚಿಗರ ಓಣಿ, ಅಕ್ಕಿಯವರ ಓಣಿ, ರಾಮಲಿಂಗ ಓಣಿ ಮುಂತಾದ ಕಡೆಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿರುತ್ತದೆ.ಇವುಗಳಲ್ಲಿ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣನಿಗೆ ಬಹಳ ಮಹತ್ವವಿದೆ.

ಹರಕೆ:

ಮಕ್ಕಳಾಗಲು ಅನೇಕರು ಬೆಳ್ಳಿಯ ತೋಟ್ಟಿಲನ್ನು, ಮದುವೆ ಆಗಲು ಬೆಳ್ಳಿಯ ಬಾಸಿಂಗವನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ.
ಹಿಂದೆ ನಾರು ಬೇನೆ ವ್ಯಾಪಕವಾಗಿದ್ದಾಗ ಅದರ ನಿವಾರಣೆಗಾಗಿ ಬೆಳ್ಳಿಯ ನಾರನ್ನು ನೀಡಿದ್ದುಂಟು.
ಅನೇಕರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಈಗಲೂ ಹರಕೆ ಹೊರುತ್ತಾರೆ.
ರಾಶಿಗಟ್ಟಲೇ ಬೆಳ್ಳಿಯ ಬಾಸಿಂಗ ಹಾಗೂ ತೊಟ್ಟಿಲುಗಳು ಇರುವುದನ್ನು ಕಾಣಬಹುದು.

ತಯಾರಿಸಿದ ಬಗೆ:

ಕಾಮಣ್ಣನಿಗೆ ಜೀವಕಳೆ ತುಂಬಬೇಕೆಂದು ಒಬ್ಬ ಶಿಲ್ಪಿ ಒಂದೊಂದು ಬಿಂದು ನಕ್ಷತ್ರದಲ್ಲಿ ಒಂದೊಂದು ಬಗೆಯ ಕಟ್ಟಿಗೆಯಿಂದ ನಿರ್ಮಿಸತೊಡಗಿದ ಕೊನೆಗೆ ಮೂರ್ತಿಯ ತಲೆಯ ಹಿಂಬಾಗದಲ್ಲಿ ಎರಡು ರಂಧ್ರಗಳು ಉಳಿದವು. ಅವನ್ನು ವಿಶಿಷ್ಟ ಕಟ್ಟಿಗೆಯಿಂದ ಪೂರ್ಣಗೊಳಿಸುವುದರೊಳಗೆ ಶಿಲ್ಪಿ ಕಾಲವಾದನು. ರಂಧ್ರ ಹಾಗೆ ಉಳಿದವು. ಈರಂಧ್ರಗಳನ್ನು ಮುಚ್ಚಲು ಯಾವ ನಕ್ಷತ್ರ ಮತ್ತು ಯಾವ ಕಟ್ಟಿಗೆ ಬೇಕೆಂಬುದು ನಿಗೂಢವಾಗಿಯೇ ಉಳಿಯಿತು. ಆದರೂ ಕಾಮಣ್ಣನ ಮುಖಚರ್ಯೆ ಅತ್ಯಂತ ಸುಂದರವಾಗಿದೆ.ಗಂಭೀರ ಮೀಸೆಯುಳ್ಳ ಹಸನ್ಮುಖದಿಂದ ಅತ್ಯಂತ ಸ್ಪೂರದ್ರೂಪಿಯಾಗಿ ಜೀವಂತ ಎದ್ದು ಬರುವಂತೆ ಗೋಚರಿಸುತ್ತದೆ. ಚೆಲುವ ಗಂಡು ಮಕ್ಕಳಿಗೆ ರಾಮಲಿಂಗ ಕಾಮಣ್ಣನಂತೆ ಚೆಲುವ ಎಂದು ಹೇಳುವ ವಾಡಿಕೆಯಿದೆ.
ಪ್ರತಿಷ್ಠಾಪನೆ: ಸುಮಾರು ಶತಮಾನದಷ್ಟು ಪ್ರಾಚೀನತೆ ಹೊಂದಿದ ಕಾಮಣ್ಣನನ್ನು ರಾಮಲಿಂಗ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುತ್ತಾರೆ. ಕಾಮಣ್ಣನನ್ನು ಹೋಳಿ ಹುಣ್ಣಿಮೆಗು ಮುನ್ನ ಬರುವ ಏಕಾದಶಿ ರಾತ್ರಿ ನಿಂತಬಂಗಿಯಲ್ಲಿರುವುದುನ್ನು ಪ್ರತಿಷ್ಠಾಪಿಸುತ್ತಾರೆ. ದ್ವಾದಶಿಯಂದು ಬೆಳಗ್ಗೆಯಿಂದ ದರ್ಶನಕ್ಕೆ ಲಭ್ಯ. ನಂತರ ಹುಣ್ಣೆಮೆ ದಿನ ಲಕ್ಷಾಂತರ ಭಕ್ತರು ಕಾಮಣ್ಣನ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ. ಭಕ್ತರು ತೆಂಗಿನಕಾಯಿಯೊಂದಿಗೆ ಬಾಸಿಂಗವನ್ನು ಅರ್ಪಿಸಿ ಧನ್ಯರಾಗುತ್ತಾರೆ. ರಾಜ್ಯದ ನಾನಾ ಭಾಗದಿಂದ ಭಕ್ತರು ಆಗಮಿಸುತ್ತಾರೆ. ಹುಣ್ಣಿಮೆ ಮರುದಿನ ಬಣ್ಣದ ಓಕುಳಿ ಆಡುತ್ತಾರೆ. ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಜೆ ನಡೆಯುತ್ತದೆ. ಅಬಾಲವದ್ಧರವರೆಗೆ ಎಲ್ಲರು ಹಲಗೆಯನ್ನು ನಾದಮಯವಾಗಿ ಬಾರಿಸುತ್ತಾರೆ. ಮೆರವಣಿಗೆ ನಂತರ ರಾತ್ರಿ ಕಾಮದಹನದೊಂದಿಗೆ ಹೋಳಿಹುಣ್ಣಿಮೆ ಮುಕ್ತಾಯವಾಗುತ್ತದೆ.

ಮರುಹುಟ್ಟು:

      ಯುಗಾದಿಯ ಪ್ರತಿಪದೆಯಂದು ರಾಮಲಿಂಗ ಕಾಮಣ್ಣ ಮರುಹುಟ್ಟು ಪಡೆಯುತ್ತಾನೆ ಎಂಬ ಪ್ರತೀತಿ ಇರುವುದರಿಂದ ಕುಳಿತ ಭಂಗಿಯಲ್ಲಿ ಕಾಮಣ್ಣನನ್ನು ಪ್ರತಿಷ್ಠಾಪಿಸುತ್ತಾರೆ. ಒಟ್ಟಾರೆ ನವಲಗುಂದದಲ್ಲಿ ಹೋಳಿ ಹುಣ್ಣಿಮೆಯನ್ನು ಭಕ್ತಿಯಿಂದ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ.